ಕ್ವಿಲರ್ - ಕೂಚ್, ಆರ್ಥರ್ ಥಾಮಸ್ 	

1963-1944. ವಿದ್ವಾಂಸ, ಕಾದಂಬರಿಕಾರ. ಕಾರನ್‍ವಾಲಿನ ಬೊಡ್‍ಮಿನ್‍ನಲ್ಲಿ ಹುಟ್ಟಿದ. ನ್ಯೂಟನ್ ಆಬಟ್ ಕಾಲೇಜು, ಕ್ಲಿಫ್ಟನ್ ಕಾಲೇಜು ಮತ್ತು ಟ್ರಿನಿಟಿ ಕಾಲೇಜುಗಳಲ್ಲಿ ವ್ಯಾಸಂಗ ನಡೆಸಿದ. 1899ರಲ್ಲಿ ಲಂಡನಿಗೆ ತೆರಳಿ ಸ್ಪೀಕರ್ ಪತ್ರಿಕೆಯ ಸಂಪಾದಕನಾದ. 1910ರಲ್ಲಿ ಸರ್ ಪದವಿ ಪಡೆದ. ಏಳನೆಯ ಎಡ್ವರ್ಡ್‍ನಿಂದ ಕೇಂಬ್ರಿಜ್‍ನಲ್ಲಿ ಸ್ಥಾಪಿತವಾದ ಆಂಗ್ಲ ಸಾಹಿತ್ಯದ ಮುಖ್ಯಸ್ಥ ಹುದ್ದೆಗೆ 1912ರಲ್ಲಿ ನೇಮಕಗೊಂಡ. ಮೊದಲಿಗೆ ಈತ ಕ್ಯೂ ಎಂಬ ಕಾವ್ಯನಾಮದಿಂದ ಕಾದಂಬರಿಗಳನ್ನು ಬರೆದು ಸಾಕಷ್ಟು ಖ್ಯಾತಿಯನ್ನು ಗಳಿಸಿದ. ಈತನ ಕಾದಂಬರಿಗಳಲ್ಲಿ ಡೆಡ್‍ಮ್ಯಾನ್ಸ್ ರಾಕ್ (1887), ಟ್ರಾಯ್ ಟೌನ್ (1888), ದಿ ಸ್ಪ್ಲೆಂಡಿಡ್ ಸ್ಪರ್ (1889), ದಿ ಬ್ಲೂ ಪೆವಿಲಿಯನ್ಸ್ (1891), ದಿ ಡೆಲೆಕ್ಟಬಲ್ ಡಚಿ (1893), ದಿ ಷಿಪ್ ಆಫ್ ಸ್ಪಾರ್ಸ್ (1899), ಫೋರ್ಟ್ ಆಮಿಟಿ (1904), ನಿಕಿ ನಾನ್, ರಿಸರ್ವಿಸ್ಟ್ (1915)-ಇವು ಮುಖ್ಯವಾದವು. ಈತ ಅರ್ಧಕ್ಕೆ ಬಿಟ್ಟ ಕ್ಯಾಸಲ್ ಡಾಕ್ ಎಂಬ ಕಾದಂಬರಿಯನ್ನು ಡೆಫ್ನಿ ಡು ಮಾರಿಯ ಎಂಬ ಲೇಖಕಿ ಪೂರ್ಣಗೊಳಿಸಿದಳು. ಇದು 1962ರಲ್ಲಿ ಬೆಳಕು ಕಂಡಿತು. ವರ್ಸಸ್ ಅಂಡ್ ಪ್ಯಾರೊಡೀಸ್ (1893), ಪೊಯಮ್ಸ್ ಅಂಡ್ ಬ್ಯಾಲಡ್ಸ್ (1896), ದಿ ವರ್ಜಿಲ್ ಆಫ್ ವೀನಸ್ (1912)-ಇವು ಈತನ ಕವನ ಸಂಕಲನಗಳು. ಈತ ಬಹು ದೊಡ್ಡ ವಿಮರ್ಶಕ ಹಾಗೂ ಸ್ಫೂರ್ತಿದಾಯಕ ಅಧ್ಯಾಪಕನೆನಿಸಿಕೊಂಡಿದ್ದ. ಆನ್ ದಿ ಆರ್ಟ್ ಆಫ್ ರೈಟಿಂಗ್ (1916), ಆನ್ ದಿ ಆರ್ಟ್ ಆಫ್ ರೀಡಿಂಗ್ (1920), ಸ್ಟಡೀಸ್ ಇನ್ ಲಿಟರೇಚರ್ (ಮೂರು ಸಂಪುಟಗಳು 1918, 1922, 1929), ಷೇಕ್ಸ್‍ಪಿಯರ್ಸ್ ವರ್ಕ್‍ಮನ್‍ಷಿಪ್ (1918), ಚಾರಲ್ಸ್ ಡಿಕನ್ಸ್ ಅಂಡ್ ಅದರ್ ವಿಕ್ಟೋರಿಯನ್ಸ್ (1925)-ಈ ಗ್ರಂಥಗಳನ್ನು ಪ್ರಕಟಿಸಿ ಆಂಗ್ಲ ಸಾಹಿತ್ಯದ ತಿರುವನ್ನೇ ಈತ ಬದಲಿಸಿದ. ಈತ ಸಂಕಲಿಸಿದ ಆಕ್ಸ್‍ಫರ್ಡ್ ಬುಕ್ ಆಫ್ ಇಂಗ್ಲಿಷ್ ವರ್ಸ್ (1900), ಆಕ್ಸ್‍ಫರ್ಡ್ ಬುಕ್ ಆಫ್ ವಿಕ್ಟೋರಿಯನ್ ವರ್ಸ್ (1913), ಆಕ್ಸ್‍ಫರ್ಡ್ ಬುಕ್ ಆಫ್ ಬ್ಯಾಲಡ್ಸ್ (1910)-ಈ ಪುಸ್ತಕಗಳು ಬಹು ಜನಪ್ರಿಯವೆನಿಸಿವೆ. ಕೇಂಬ್ರಿಜ್‍ನ ಹೊಸ ಆವೃತ್ತಿಯ ಷೇಕ್ಸ್‍ಪಿಯರ್ ಮಹಾಸಂಪುಟಕ್ಕೆ ಈತ ಸಹಸಂಪಾದಕನಾಗಿದ್ದ. ಅಬರ್‍ಡೀನ್, ಎಡಿನ್‍ಬರೊ, ಬ್ರಿಸ್ಟಲ್ ಮುಂತಾದ ವಿಶ್ವವಿದ್ಯಾಲಯಗಳು ಈತನಿಗೆ ಗೌರವ ಪದವಿಯನ್ನು ನೀಡಿ ಸನ್ಮಾನಿಸಿವೆ. ನೌಕಾವಿಹಾರದಲ್ಲಿ ಮತ್ತು ದೋಣಿ ನಡೆಸುವುದರಲ್ಲಿ ಈತನಿಗೆ ಹೆಚ್ಚಿನ ಆಸಕ್ತಿ ಇತ್ತು.		(ಎಚ್.ವಿ.ಎಸ್.)